



ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಐ.ಆರ್ ಮಹಾ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಕ್ಕಿದೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ವಿವಿಧ ಬೂತ್‌ಗಳಿಗೆ ಭೇಟಿ ನೀಡಿ ಮನೆ-ಮನೆ ಸಂಪರ್ಕ ನಡೆಸಿ, ಪಕ್ಷದ ಪ್ರಮುಖರು ಹಾಗೂ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.


ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅದ್ಯಾಪಾಡಿ, ಕಂದಾವರ ಹಾಗೂ ಕೊಳಂಬೆ ವ್ಯಾಪ್ತಿಯಲ್ಲಿ ನಡೆದ ಎಸ್.ಐ.ಆರ್ ಮಹಾ ಅಭಿಯಾನದ ಅಂಗವಾಗಿ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಬಿರುಸಿನ ಪ್ರವಾಸ ಕೈಗೊಂಡರು.

ಅದ್ಯಾಪಾಡಿ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 174 ಮತ್ತು 175ರಲ್ಲಿ ಮನೆ-ಮನೆಗೆ ಭೇಟಿ ನೀಡಿ ಜನರಿಗೆ ಅಭಿಯಾನದ ಮಾಹಿತಿ ನೀಡಿದರು. ಇದೇ ವೇಳೆ ಆದಿನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸದಾಶಿವ ಭಟ್, ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಹಾಗೂ ಪ್ರಮುಖರಾದ ಕುಮಾರ್ ಡಿ. ಶೆಟ್ಟಿ ಸೇರಿದಂತೆ ಹಲವು ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಗಂಜಿಮಠ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶೋಧನ್ ಆದ್ಯಪಾಡಿ, ಯಾದವ ಕುಲಾಲ ಹಾಗೂ ಬೂತ್ ಅಧ್ಯಕ್ಷ ಕೃಷ್ಣ ಕುಲಾಲ ಅವರ ಮನೆಗಳಿಗೆ ಭೇಟಿ ನೀಡಿ ಪಕ್ಷದ ಸಂಘಟನಾ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿದರು.
ಇದೇ ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬೂತ್ ಮಟ್ಟದ ಅಧಿಕಾರಿಗಳಾದ ಅಕ್ಷತಾ, ಸೌಮ್ಯ ಹಾಗೂ ಉಷಾ ಅವರ ಮನೆಗಳಿಗೆ ಭೇಟಿ ನೀಡಿ ಬಿಎಲ್‌ಒಗಳೊಂದಿಗೆ ಸಮಾಲೋಚನೆ ನಡೆಸಿದರು.
ಕಂದಾವರದ ಬೂತ್ ಸಂಖ್ಯೆ 170ರಿಂದ 173 ಹಾಗೂ ಕೊಳಂಬೆಯ 176ರಿಂದ 179ರವರೆಗೆ ಪಾದಯಾತ್ರೆ ನಡೆಸಿ ಕಾರ್ಯಕರ್ತರೊಂದಿಗೆ ಮನೆ-ಮನೆ ಸಂಪರ್ಕ ಅಭಿಯಾನ ನಡೆಸಿದರು.
ಅಭಿಯಾನದ ನಡುವೆಯೇ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮೂಡುಕರೆ–ಕಂದಾವರ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲೂ ಭಾಗವಹಿಸಿದ ಕಿಶೋರ್ ಕುಮಾರ್ ಪುತ್ತೂರು, ಸಂಘಟನೆಯ ಕಾರ್ಯಕರ್ತರಿಗೆ ಶುಭಾಶಯ ಕೋರಿದರು.
ಈ ಕಾರ್ಯಕ್ರಮಗಳ ವೇಳೆ ಗಂಜಿಮಠ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶೋಧನ್ ಆದ್ಯಪಾಡಿ ಸೇರಿದಂತೆ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
