



ಬಿ.ಸಿ.ರೋಡ್‌ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ಯುವತಿ ಲಾವಣ್ಯ ಅವರ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ನಡುಹಗಲಲ್ಲೇ ಹೆಣ್ಣುಮಗಳಿಗೆ ರಕ್ಷಣೆ ಇಲ್ಲದಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯ ಎಂದು ಆರೋಪಿಸಿದರು.


ಅಲ್ಲದೆ, ಯುವತಿಯ ಮೇಲೆ ದುಷ್ಕರ್ಮಿ ದಾಳಿ ನಡೆಸುತ್ತಿದ್ದ ವೇಳೆ ರಕ್ಷಿಸಲು ಮುಂದಾಗುವ ಬದಲು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಸಾರ್ವಜನಿಕರ ಮನೋಭಾವಕ್ಕೂ ಅವರು ಬೇಸರ ವ್ಯಕ್ತಪಡಿಸಿದರು. ಅಲ್ಲಿದ್ದವರು ಒಗ್ಗಟ್ಟಾಗಿ ತಡೆದಿದ್ದರೆ ಲಾವಣ್ಯ ಅವರ ಜೀವ ಉಳಿಯಬಹುದಿತ್ತು ಎಂದು ಹೇಳಿದರು.
ಬಂಧಿತ ಆರೋಪಿಯ ವಿರುದ್ಧ ಕಠಿಣ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತ್ವರಿತ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ ಕಿಶೋರ್ ಕುಮಾರ್ ಪುತ್ತೂರು, ಇಂತಹ ವಿಕೃತ ಮನಸ್ಥಿತಿಯ ಅಪರಾಧಿಗಳಿಗೆ ಯಾವುದೇ ಕರುಣೆ ತೋರಬಾರದು ಎಂದು ಹೇಳಿದರು. ತಮ್ಮ ಹೇಳಿಕೆಯಲ್ಲಿ ಆರೋಪಿಗೆ ಎನ್‌ಕೌಂಟರ್ ಮಾಡುವಂತಹ ಕಠಿಣ ಕ್ರಮಕ್ಕೂ ನಾಗರಿಕ ಸಮಾಜದ ಬೆಂಬಲವಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ಮೃತ ಲಾವಣ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ದುಃಖಿತ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ ಕಲಿಮಾರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ, ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಪ್ರಧಾನ ಕಾರ್ಯದರ್ಶಿ ಶಿಶಿಧರ್ ನಾಯಕ್ ಹಾಗೂ ನಾಗೇಂದ್ರ ಬಾಳಿಗ ಉಪಸ್ಥಿತರಿದ್ದರು.
