




ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖೋಟಾ ನೋಟು ಮುದ್ರಣ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿ, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಭಾರತೀಯ ₹500 ಮುಖಬೆಲೆಯ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ. ನೇತೃತ್ವದ ತಂಡ ಜುಲೈ 16ರಂದು ಬೆಳಿಗ್ಗೆ ದಾಳಿ ನಡೆಸಿತು.


ಕಾರ್ಯಾಚರಣೆಯಲ್ಲಿ ಇಬ್ರಾಹಿಂ, ಶರೀಪ್, ಸಂದೀಪ್ ಪುಂಡಲಿಕ ಶೋಳಂಬಿ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್, ಸಿರಾಜುದ್ದೀನ್ ಹಾಗೂ ಇರ್ಷಾದ್ ಎಂಬ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ವೇಳೆ ₹500 ಮುಖಬೆಲೆಯ ಒಂದು ನಕಲಿ ನೋಟು, ₹500 ನೋಟಿನ ಮಾದರಿಯ 21 ಎ-4 ಗಾತ್ರದ ಮುದ್ರಿತ ಹಾಳೆಗಳು, ಕಂಪ್ಯೂಟರ್, ಝೆರಾಕ್ಸ್ ಯಂತ್ರ, ಸೀಲ್‌ಗಳು ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಇತರೆ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 103/2026 ದಾಖಲಿಸಿಕೊಂಡು ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 178ರಡಿ ತನಿಖೆ ಮುಂದುವರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿಂದು ಮಣಿ ಆರ್.ಎನ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟಕದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪ್ಪಿನಂಗಡಿ ಪೊಲೀಸರೊಂದಿಗೆ ಸಹಕರಿಸಿದ್ದರು.
