



ಪುತ್ತೂರು: ಬಲ್ನಾಡು–ಬೆಳಿಯೂರುಕಟ್ಟೆ ರಸ್ತೆಯ ಉಜುರುಪಾದೆ ಸಮೀಪ ಅಪಾಯದ ಅಂಚಿನಲ್ಲಿರುವ ಎರಡು ಬೃಹತ್ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.


ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ–ಮಳೆಯಿಂದ ಮರಗಳು ಯಾವುದೇ ಕ್ಷಣದಲ್ಲಿ ಉರುಳುವ ಭೀತಿ ಎದುರಾಗಿದೆ.


ಅಪಾಯದಲ್ಲಿರುವ ಈ ಮರಗಳ ಪಕ್ಕದಲ್ಲೇ ಒಂದು ಕುಟುಂಬ ವಾಸಿಸುತ್ತಿದ್ದು, ಮರಗಳು ಉರುಳಿದರೆ ಮನೆಗೆ ಹಾಗೂ ನಿವಾಸಿಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಅಲ್ಲದೆ, ಮರದ ಕೊಂಬೆಗಳು ವಿದ್ಯುತ್ ತಂತಿಗಳನ್ನು ಆವರಿಸಿಕೊಂಡಿರುವುದರಿಂದ ವಿದ್ಯುತ್ ಅವಘಡ ಸಂಭವಿಸುವ ಆತಂಕವೂ ವ್ಯಕ್ತವಾಗಿದೆ.
“ಇದೇ ಸ್ಥಳದಲ್ಲಿ ಕೇವಲ ಎರಡು ದಿನಗಳ ಹಿಂದೆಯಷ್ಟೇ ಬೃಹತ್ ಹಲಸಿನ ಮರ ಉರುಳಿ ವಿದ್ಯುತ್ ಕಂಬಕ್ಕೆ ಹಾನಿಯಾಗಿತ್ತು. ಇದೀಗ ಮತ್ತೆ ಇದೇ ಪ್ರದೇಶದಲ್ಲಿರುವ ಅಪಾಯದ ಅಂಚಿನಲ್ಲಿರುವ ಎರಡು ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.”
ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಾಯದ ಮರಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
