



ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂನ್ 29ರಂದು ನಡೆದಿದ್ದ ಬಹುಕೋಟಿ ಮೌಲ್ಯದ ಡಕಾಯಿತ ಪ್ರಕರಣಕ್ಕೆ ಸಂಬಂಧಿಸಿ, ಕೃತ್ಯಕ್ಕೆ ಸಹಕರಿಸಿದ ಆರೋಪಿಗಳೂ ಸೇರಿದಂತೆ ಮೂವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ ಅವರ ಕಾರನ್ನು ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ ಮುಸುಕುಧಾರಿಗಳು ಅಡ್ಡಗಟ್ಟಿದ್ದರು. ತಲವಾರು ತೋರಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಆರೋಪಿಗಳು, ದೂರುದಾರರ ಪತ್ನಿ ಮತ್ತು ಮಗನನ್ನು ಕೆಲ ಕಿಲೋಮೀಟರ್ ದೂರ ಕರೆದೊಯ್ದು ಬಿಟ್ಟು, ಸುಮಾರು 23.10 ಲಕ್ಷ ರೂಪಾಯಿ ಮೌಲ್ಯದ ಕಾರು, 180 ಗ್ರಾಂ ಚಿನ್ನಾಭರಣ, ಎರಡು ಮೊಬೈಲ್ ಫೋನ್ ಸೇರಿದಂತೆ ದರೋಡೆ ನಡೆಸಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪಣಂಬೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಮೊದಲು ದರೋಡೆಗೀಡಾದ ಸ್ವಿಫ್ಟ್ ಡಿಜೈರ್ ಕಾರನ್ನು ಬಂಟ್ವಾಳದ ಪಚ್ಚಿನಡ್ಕ ಪ್ರದೇಶದಲ್ಲಿ ಪತ್ತೆಹಚ್ಚಿದರು.
ಬಳಿಕ ತನಿಖೆ ಮುಂದುವರೆಸಿ, ಕೇರಳದ ಕಣ್ಣೂರಿನಲ್ಲಿ ಪ್ರಮುಖ ಆರೋಪಿ ನಿಮಿಲ್ ಆರ್.ಕೆ., ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ್ದ ಇರ್ಷಾದ್, ಹಾಗೂ ಮೂರ್ನಾಡಿನಲ್ಲಿ ಕೃತ್ಯಕ್ಕೆ ಕಾರು ಒದಗಿಸಿದ್ದ ಮುಸ್ತಾಫ ಎಂಬಾತನನ್ನು ಬಂಧಿಸಲಾಯಿತು.
ಪ್ರಾಥಮಿಕ ತನಿಖೆಯಲ್ಲಿ ಒಟ್ಟು 16 ಮಂದಿ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅವರಲ್ಲಿ 14 ಮಂದಿ ನೇರವಾಗಿ ಡಕಾಯಿತಿಯಲ್ಲಿ ಭಾಗಿಯಾಗಿದ್ದರೆ, ಇಬ್ಬರು ಆಶ್ರಯ ಮತ್ತು ಸಹಕಾರ ನೀಡಿರುವುದು ತಿಳಿದುಬಂದಿದೆ.
ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
