



ಪುತ್ತೂರು: ರಾತ್ರಿ 11 ಗಂಟೆ… ಗ್ರಾಮಸ್ಥರು ಇನ್ನೂ ಶಾಸಕರಿಗಾಗಿ ಕಾದು ಕುಳಿತಿದ್ದರು. ರಸ್ತೆ ಅಭಿವೃದ್ಧಿಯ ಕನಸು ನನಸಾಗುವ ಕ್ಷಣಕ್ಕಾಗಿ ಕಾದಿದ್ದ ಅಳಿಕೆ ಗ್ರಾಮದ ಕೊಳಂಜಿಮಾರ್-ಪಡಿಬಾಗಿಲು ರಸ್ತೆಯ ನಿವಾಸಿಗಳಿಗೆ ಕೊನೆಗೂ ಸಂತಸದ ಕ್ಷಣ ಒದಗಿ ಬಂತು.


ಭಾನುವಾರ ಅಳಿಕೆ ಗ್ರಾಮದಲ್ಲಿ ವಿವಿಧ ಗ್ರಾಮೀಣ ಸಂಪರ್ಕ ರಸ್ತೆಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಸುಮಾರು 21 ಕಡೆಗಳಲ್ಲಿ ಗುದ್ದಲಿಪೂಜೆ ನೆರವೇರಿಸಿ, ಗ್ರಾಮಸ್ಥರ ಅಹವಾಲು ಆಲಿಸುತ್ತಾ ರಾತ್ರಿ 11 ಗಂಟೆ ಸುಮಾರಿಗೆ ಕೊಳಂಜಿಮಾರ್-ಪಡಿಬಾಗಿಲು ರಸ್ತೆಗೆ ತಲುಪಿದರು.

ಈ ವೇಳೆ ಸಂತಸ ವ್ಯಕ್ತಪಡಿಸಿದ ಹಿರಿಯ ಮಹಿಳೆಯೊಬ್ಬರು ತುಳು ಭಾಷೆಯಲ್ಲಿ, “ಅಶೋಕಣ್ಣಾ… ಕುಲೆಕ್ಕುಳು ಪಿದಾಡುನ ಪೊರ್ತಾಂಡ್… ಈತ್ ಪೊರ್ತುಗು ಬತ್ತರತ್ತ ಈರ್ ಗ್ರೇಟ್… ಇರೆನಂಚಿನ ಶಾಸಕೆರ್ ಇತ್ತ್ಂಡ ಪಾಪದಾಯೆಗ್ ಬದುಕೊಳಿ…” ಎಂದು ಭಾವೋದ್ವೇಗದಿಂದ ಹೇಳಿದರು. ತಡರಾತ್ರಿಯಾದರೂ ತಮ್ಮ ರಸ್ತೆಯ ಅಭಿವೃದ್ಧಿಗಾಗಿ ಸ್ವತಃ ಆಗಮಿಸಿ ಶಿಲಾನ್ಯಾಸ ನೆರವೇರಿಸಿದ ಶಾಸಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಕೊಳಂಜಿಮಾರ್-ಪಡಿಬಾಗಿಲು ರಸ್ತೆಯ ಅಭಿವೃದ್ಧಿಗೆ ₹25 ಲಕ್ಷ ಅನುದಾನ ಮಂಜೂರಾಗಿರುವ ಹಿನ್ನೆಲೆಯಲ್ಲಿ ಕಾಲನಿಯ ನಿವಾಸಿಗಳು ರಾತ್ರಿ ತಡವಾಗಿದ್ದರೂ ಶಾಸಕರನ್ನು ಸ್ವಾಗತಿಸಲು ಕಾದಿದ್ದರು. ಈ ಭಾಗಕ್ಕೆ ಇದುವರೆಗೂ ಯಾವುದೇ ಶಾಸಕ ಭೇಟಿ ನೀಡಿರಲಿಲ್ಲ. ತಮ್ಮ ಕಷ್ಟ-ಸುಖಗಳನ್ನು ಆಲಿಸಿದ ಮೊದಲ ಶಾಸಕರಾಗಿ ಅಶೋಕ್ ಕುಮಾರ್ ರೈ ಅವರನ್ನು ಗ್ರಾಮಸ್ಥರು ಸ್ವಾಗತಿಸಿದರು.
ಗುದ್ದಲಿಪೂಜೆ ಆರಂಭವಾಗುವಷ್ಟರಲ್ಲಿ ನಿದ್ದೆಯಲ್ಲಿದ್ದ ಇಬ್ಬರು ಮಹಿಳೆಯರು ಕೂಡ ಎದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. “ಇರೆಗ್ ನಿದ್ರೆ ಇಜ್ಜಿ… ಎಂಕ್ಲೆಗ್ ಬೋಡಾದ್ ಈತ್ ರಾತ್ರಿ ಬತ್ತರ್… ಎಂಕ್ಲೊ ಜೆತ್ತ್ಂಡ ದೇವೆರ್ ಮೆಚ್ಚಾಯೆರ್…” ಎಂದು ಅವರು ಸಂತಸ ವ್ಯಕ್ತಪಡಿಸಿದರು.
ತಡರಾತ್ರಿಯಲ್ಲೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಶಿಲಾನ್ಯಾಸ ನೆರವೇರಿಸಿದ ಈ ಕಾರ್ಯಕ್ರಮ ಅಳಿಕೆ ಗ್ರಾಮದಲ್ಲಿ ವಿಶೇಷ ಗಮನ ಸೆಳೆಯಿತು.
