



ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಜೂನ್ 20ರಂದು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರಾದ ಬಾಲಚಂದ್ರ, ಶ್ರೀಮತಿ ಗಾಯತ್ರಿ ಹಾಗೂ ಮುತ್ತಪ್ಪ ಅವರು ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು, ಯೋಗದ ಮಹತ್ವ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಮೂಡಿಸಿದರು.


ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಕಾರ ಪರಿವೀಕ್ಷಕರಾದ ಭಗಿನಿ ಮೀನಾಕ್ಷಿ ಮಾತಾಜಿ ಮಾತನಾಡಿ, “ಮನಸ್ಸು ಹೇಳಿದ್ದನ್ನು ದೇಹ ಮಾಡುತ್ತದೆ. ಅದು ಸಾಧ್ಯವಾಗಬೇಕಾದರೆ ಯೋಗ ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ಜೀವನದ ಭಾಗವಾಗಿಸಿಕೊಂಡು ಅದರ ಪ್ರಯೋಜನ ಪಡೆಯಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕರಾದ ಗಣೇಶ್ ವಾಗ್ಲೆ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಕಾವ್ಯ ಉಪಸ್ಥಿತರಿದ್ದರು.
ಸಹಶಿಕ್ಷಕಿ ಧನ್ಯಶ್ರೀ ಸ್ವಾಗತಿಸಿ, ಯೋಗೀಶ್ವರಿ ವಂದಿಸಿದರು. ಕಾರ್ಯಕ್ರಮವನ್ನು ಸೌಮ್ಯ ಮಾತಾಜಿ ನಿರೂಪಿಸಿದರು. ಯೋಗ ದಿನಾಚರಣೆ ವಿದ್ಯಾರ್ಥಿಗಳಲ್ಲಿ ಆರೋಗ್ಯ, ಶಿಸ್ತು ಹಾಗೂ ಮಾನಸಿಕ ಸದೃಢತೆಯ ಮಹತ್ವವನ್ನು ಸಾರುವ ಮೂಲಕ ಯಶಸ್ವಿಯಾಗಿ ನೆರವೇರಿತು.
