




ಮಂಗಳೂರು: ಬಹುಕಾಲದಿಂದ ಸಾರ್ವಜನಿಕರು ನಿರೀಕ್ಷಿಸಿದ್ದ ಬೊಳುವಾರು –ಪಡೀಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇದೀಗ ಮತ್ತಷ್ಟು ವೇಗ ಸಿಕ್ಕಿದೆ. ಮೂಕಾಂಬಿಕಾ ಗ್ಯಾಸ್ ಏಜೆನ್ಸಿಗೆ ತೆರಳುವ ರಸ್ತೆಯ ಒಂದು ಭಾಗದಲ್ಲಿ ಈಗಾಗಲೇ ಕಾಂಕ್ರೀಟ್ ರಸ್ತೆ ನಿರ್ಮಾಣ ಪೂರ್ಣಗೊಂಡಿದ್ದು, ಇದೀಗ ರಸ್ತೆಯ ಇನ್ನೊಂದು ಬದಿಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.


ಇಂದು ಜೆಸಿಬಿ ಯಂತ್ರದ ಮೂಲಕ ಹಳೆಯ ಡಾಂಬರು ರಸ್ತೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಹಂತದ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ ಒಂದು ಬದಿಯ ರಸ್ತೆ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.


ರಸ್ತೆಯ ಸಂಪೂರ್ಣ ಅಭಿವೃದ್ಧಿಯಿಂದ ಈ ಭಾಗದ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ಉತ್ತಮ ಸಂಚಾರ ಸೌಲಭ್ಯ ದೊರೆಯಲಿದ್ದು, ಮಳೆಗಾಲದಲ್ಲೂ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
