

ಮಂಗಳೂರು : ಮಂಗಳೂರಿನ ಕಾವೂರು ಪ್ರದೇಶದಲ್ಲಿರುವ ಮೂರು ಮನೆಗಳ ಬಾವಿ ನೀರು ಡೀಸೆಲ್‌ನಿಂದ ಕಲುಷಿತಗೊಂಡಿರುವುದು ಪತ್ತೆಯಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ ತಿಂಗಳಿನಿಂದ ಈ ಸಮಸ್ಯೆ ಗಮನಕ್ಕೆ ಬಂದಿದ್ದು, ಬಾವಿಯ ನೀರನ್ನು ಖಾಲಿ ಮಾಡಿದರೂ ಡೀಸೆಲ್ ಪದರ ಮತ್ತೆ ಉಕ್ಕಿ ಬರುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯು ಬಾವಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ, ನೀರು ಕುಡಿಯಲು ಅನರ್ಹವೆಂದು ವರದಿ ನೀಡಿದೆ. ಒಂದು ಬಾವಿಯ ನೀರಿನಲ್ಲಿ ಶೇ 28ರಷ್ಟು ಡೀಸೆಲ್ ಅಂಶ ಪತ್ತೆಯಾಗಿದೆ. ನೀರಿನಲ್ಲಿ ಕಾಗದವನ್ನು ಅದ್ದಿ ಬೆಂಕಿ ಹಚ್ಚಿದಾಗ ಅದು ಉರಿಯುತ್ತಿರುವುದು ಡೀಸೆಲ್ ಅಂಶದ ಇರುವಿಕೆಯನ್ನು ದೃಢಪಡಿಸಿದೆ. ಕುಡಿಯುವ ನೀರಿಗಾಗಿ ಬಾವಿಯನ್ನೇ ಅವಲಂಬಿಸಿದ್ದ ಜನರು ಈಗ ಕಾರ್ಪೊರೇಷನ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಈ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ಮತ್ತು ಶಾಶ್ವತ ಪರಿಹಾರ ಒದಗಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.


