


ಉಡುಪಿ: ಮೀನು ಸಾಗಾಟದ ವಾಹನ ಹಾಗೂ ಜೀಪ್ (Jeep) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕೇರಳ (Kerala) ಮೂಲದ ಇಬ್ಬರು ಪ್ರವಾಸಿಗರು (Tourists) ಸಾವನ್ನಪ್ಪಿರುವ ಘಟನೆ ಕೊಲ್ಲೂರಿನ (Kollur) ಕೊಡಚಾದ್ರಿಯ (Kodachadri) ದಳಿ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಜೀಪಿನಲ್ಲಿದ್ದ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕೊಲ್ಲೂರಿಗೆ ಆಗಮಿಸಿದ್ದ ಕೇರಳ ಮೂಲದ ಪ್ರವಾಸಿಗರು ಕೊಲ್ಲೂರು ದೇವಿಯ ದರ್ಶನ ಮುಗಿಸಿ ಕೊಡಚಾದ್ರಿಗೆ ತೆರಳಿದ್ದರು. ಸ್ಥಳೀಯ ಪ್ರವಾಸಿ ಜೀಪ್‌ನಲ್ಲಿ ಕೊಡಚಾದ್ರಿಗೆ ತೆರಳಿ ವಾಪಾಸ್ ಆಗುವ ವೇಳೆ ಮಲ್ಪೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮೀನು ಸಾಗಾಟದ ವಾಹನ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶವಾದ ಹಿನ್ನೆಲೆ ಅಪಘಾತ ಸಂಭವಿಸಿದೆ.


ಪ್ರವಾಸಿಗರು ಟೂರಿಸ್ಟ್ ಬಸ್ ಮೂಲಕ ಕೊಲ್ಲೂರಿಗೆ ಆಗಮಿಸಿದ್ದರು. ಸದ್ಯ ಗಾಯಾಗೊಂಡ ಪ್ರವಾಸಿಗರಿಗೆ ಕುಂದಾಪುರ, ಉಡುಪಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಲೂರು ಪೊಲೀಸರು ಮೃತ ಹಾಗೂ ಗಾಯಾಳು ಕುಟುಂಬಸ್ಥರ ಆಗಮನಕ್ಕೆ ಕಾಯುತ್ತಿದ್ದಾರೆ.
