



ಬಂಟ್ವಾಳ: ರಸ್ತೆ ದಾಟುತ್ತಿದ್ದ ಸಂದರ್ಭ ಆಟೋರಿಕ್ಷಾ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅಮ್ಟೂರು ಕ್ರಾಸ್ನಲ್ಲಿ ನಡೆದಿದೆ.


ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಲೋಕೇಶ್ ಮೂಲ್ಯ (44 ವ) ಮೃತಪಟ್ಟವರು.

ಲೋಕೇಶ್ ಮೂಲ್ಯ ಅವರು ಕಲ್ಲಡ್ಕದ ನಯಾರ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆ ಅತೀ ವೇಗದಿಂದ ಬಂದ ರಿಕ್ಷಾವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲೋಕೇಶ್ ಮೂಲ್ಯ ರಸ್ತೆಗೆಸೆಯಲ್ಪಟ್ಟಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಆಟೋರಿಕ್ಷಾ ಪಲ್ಟಿಯಾಗಿದೆ. ಆಟೋರಿಕ್ಷಾದಲ್ಲಿ ಚಾಲಕನ ಪತ್ನಿ, ಮಕ್ಕಳು ಹಾಗೂ ಮಾವ ಪ್ರಯಾಣಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅವರು ಅಪಾಯದಿಂದ ಪಾರಾಗಿದ್ದಾರೆ.
ಲೋಕೇಶ್ ಅವರು ಸುಭಾಷ್ ನಗರದ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಸದಸ್ಯರಾಗಿದ್ದು, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
