Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಸಾವಿರಾರು ಭಕ್ತರಿಗೆ ಕಳೆದ ಐದು ವರ್ಷಗಳಿಂದ ಅನ್ನದಾಸೋಹ ಸೇವೆ ನಡೆಸಿಕೊಂಡು ಬರುತ್ತಿರುವ ಬೆಂಗಳೂರಿನ ಜಿ.ಕೆ. ಫೌಂಡೇಷನ್ ಮುಖ್ಯಸ್ಥ ಹಾಗೂ ಉದ್ಯಮಿ ಮಹೇಶ್ ಜಿ., ಈ ಬಾರಿ ತಮ್ಮ ಕುಟುಂಬಸ್ಥರು ಮತ್ತು ದಾಸೋಹ ಕಾರ್ಯಕರ್ತರಿಗೆ ದರ್ಶನದ ವೇಳೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿದ್ದಾರೆ.

Out Look Fashion

ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಅನ್ನದಾನಕ್ಕಾಗಿ ಸುಮಾರು ₹30 ಲಕ್ಷ ವೆಚ್ಚ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಹೂವಿನ ಅಲಂಕಾರ ಸೇವೆಯನ್ನೂ ನಡೆಸಿಕೊಂಡು ಬಂದಿದ್ದೇನೆ ಎಂದು ಮಹೇಶ್ ತಿಳಿಸಿದ್ದಾರೆ.

Jaya Refrigeration and Air Condition

ಆಗಸ್ಟ್ 7ರಂದು ಬೆಳಗ್ಗೆ 5 ಗಂಟೆಗೆ ದಾಸೋಹ ಸೇವೆಗಾಗಿ ಬೆಟ್ಟಕ್ಕೆ ತೆರಳುವ ವೇಳೆ ತಾವರೆಕಟ್ಟೆ ಬಳಿ ಪೊಲೀಸರು ವಾಹನ ತಡೆದಿದ್ದರು. ಪ್ರಾಧಿಕಾರದವರು ವಾಹನ ಪ್ರವೇಶಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದರೂ ಸುಮಾರು 30 ನಿಮಿಷಗಳ ಕಾಲ ತಡೆದು ನಂತರ ವಾಹನವನ್ನು ಒಳಗೆ ಬಿಡಲಾಯಿತು ಎಂದು ಅವರು ಆರೋಪಿಸಿದ್ದಾರೆ.

ನಂತರ ಕುಟುಂಬದ ಸದಸ್ಯರೊಂದಿಗೆ ಮಹಿಷಾಸುರ ಮೂರ್ತಿ ಬಳಿಗೆ ದರ್ಶನಕ್ಕಾಗಿ ತೆರಳಿದಾಗ ಪೊಲೀಸರು ತಡೆದಿದ್ದು, ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರು ದರ್ಶನಕ್ಕೆ ಅವಕಾಶವಿಲ್ಲ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾರೆ. ಬಳಿಕ ಕುಟುಂಬದ ಸದಸ್ಯರು ₹2,000 ಟಿಕೆಟ್ ಪಡೆದು ದರ್ಶನ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

ಇದೇ ವೇಳೆ ಬೆಳಗ್ಗೆ ದಾಸೋಹದ ಪಾಕಶಾಲೆಗೆ ಇಬ್ಬರು ವ್ಯಕ್ತಿಗಳು ಅನುಮತಿಯಿಲ್ಲದೆ ಪ್ರವೇಶಿಸಿ ಆಹಾರವನ್ನು ಪಾತ್ರೆಗಳಲ್ಲಿ ತುಂಬಿಕೊಂಡು ಹೋಗಲು ಮುಂದಾಗಿದ್ದರು. ಪ್ರಶ್ನಿಸಿದಾಗ ಅವರು ಪೊಲೀಸ್ ಸಿಬ್ಬಂದಿ ಎಂದು ಹೇಳಿ ದಾಸೋಹದ ಮೇಲ್ವಿಚಾರಕರೊಂದಿಗೆ ವಾಗ್ವಾದ ನಡೆಸಿದರು. ಬಳಿಕ ರಘು ಎಂಬ ಪೊಲೀಸ್ ಪೇದೆ ಸ್ಥಳಕ್ಕೆ ಬಂದು ದಾಸೋಹ ಕಾರ್ಯಕರ್ತರ ಮೇಲೆ ದರ್ಪ ತೋರಿಸಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾರೆ.

ಸಂಜೆಯ ವೇಳೆಯಲ್ಲೂ ತಮ್ಮ ಮಗ ಹಾಗೂ ದಾಸೋಹದ ಸ್ವಯಂಸೇವಕರಿಗೆ ದರ್ಶನಕ್ಕೆ ತೆರಳಲು ತಡೆ ಒಡ್ಡಲಾಯಿತು. ₹2,000 ಟಿಕೆಟ್ ಪಡೆದ ನಂತರವೂ ಅವರನ್ನು ಹಿಂಬಾಲಿಸಿ ಪೊಲೀಸ್ ಸಿಬ್ಬಂದಿಗೆ ಗುರುತು ಮಾಡಿ ತೋರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮಗನನ್ನು ಕೈಯಿಂದ ತಳ್ಳಿದ್ದಾರೆ ಎಂದು ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ಸ್ಥಳದಲ್ಲಿದ್ದ ಪತ್ರಕರ್ತರು ಮತ್ತು ಭಕ್ತರು ಪೊಲೀಸರ ಕ್ರಮವನ್ನು ಪ್ರಶ್ನಿಸಿದ ಬಳಿಕ ಹಿರಿಯ ಪೊಲೀಸ್ ಅಧಿಕಾರಿ ತಮ್ಮ ಮಗನ ಬಳಿ ಬಂದು ದರ್ಶನ ಮಾಡಿಸುವುದಾಗಿ ತಿಳಿಸಿದರು. ಆದರೆ ಮನನೊಂದಿದ್ದ ಮಗ ದರ್ಶನ ಬೇಡ ಎಂದು ಹೇಳಿ ಕಣ್ಣೀರಿನಿಂದ ಹೊರಬಂದಿದ್ದಾರೆ ಎಂದು ಮಹೇಶ್ ತಿಳಿಸಿದ್ದಾರೆ.

ಐದು ವರ್ಷಗಳಿಂದ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಭಕ್ತರ ಸೇವೆಯ ಉದ್ದೇಶದಿಂದ ಅನ್ನದಾಸೋಹ ನಡೆಸಿಕೊಂಡು ಬಂದಿದ್ದು, ಈ ಬಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರಿಂದ ಎದುರಾದ ವರ್ತನೆ ತೀವ್ರ ನೋವುಂಟು ಮಾಡಿದೆ ಎಂದು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಯ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಹೇಶ್, ತಮ್ಮ ಕುಟುಂಬ, ಸ್ನೇಹಿತರು ಹಾಗೂ ದಾಸೋಹ ಕಾರ್ಯಕರ್ತರಿಗೆ ನಡೆದಿರುವ ಅವಮಾನವನ್ನು ತಾಯಿ ಚಾಮುಂಡೇಶ್ವರಿಯೇ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.