



ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಶಾಲಾ ಬಸ್ ಡಿಕ್ಕಿಯಾಗಿ ಸ್ಕೂಟಿ ಸವಾರ ಯುವತಿಯೊಬ್ಬರು ಬಸ್ ಚಕ್ರದಡಿ ಸಿಲುಕಿದ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಶಿಕ್ಷಕರ ಸಮಯಪ್ರಜ್ಞೆ ಮತ್ತು ಸಾಹಸಮಯ ರಕ್ಷಣಾ ಕಾರ್ಯದಿಂದ ಯುವತಿಯ ಜೀವ ಉಳಿದಿದೆ.

ಜುಲೈ 17ರ ಸಂಜೆ ಪಟ್ಟೂರು ಸಮೀಪದ ಅಡ್ಡೆ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಮಂಡೂರುಪಳಿಕೆ ನಿವಾಸಿ ಸಿಬಂತಿ ಚಂದ್ರ ಅವರ ಪುತ್ರಿ ಪ್ರಣಮ್ಯ (19) ಅವರು ಪಟ್ರಮೆಯಿಂದ ಉಪ್ಪಾರಪಳಿಕೆ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ, ಎದುರಿನಿಂದ ಬಂದ ನೆಲ್ಯಾಡಿಯ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಪ್ರಣಮ್ಯ ಅವರು ಬಸ್ಸಿನ ಚಕ್ರದಡಿ ಸಿಲುಕಿಕೊಂಡು ಸಹಾಯಕ್ಕಾಗಿ ಕೂಗಾಡುತ್ತಿದ್ದರು.
ಅದೇ ವೇಳೆ ವಿದ್ಯಾರ್ಥಿಗಳನ್ನು ಬಿಡಲು ಬರುತ್ತಿದ್ದ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಶಾಲಾ ವಾಹನವನ್ನು ಚಾಲಕ ಜಯರಾಮ ಗೌಡ ಅವರು ತಕ್ಷಣ ನಿಲ್ಲಿಸಿ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಅವರೊಂದಿಗೆ ಶಿಕ್ಷಕಿಯರಾದ ಶೃತಿ, ಸಂಧ್ಯಾ ಪಿ.ಕೆ., ಮಲ್ಲಿಕಾ ಎಸ್., ಸೌಮ್ಯ ಶ್ರೀ ಕೆ.ಆರ್., ಧನ್ಯಶ್ರೀ, ದಿವ್ಯ ಹಾಗೂ ಶಿಕ್ಷಕಿ ಮತ್ತು ಸುದ್ದಿ ಬಿಡುಗಡೆ ಪತ್ರಿಕೆಯ ಪ್ರತಿನಿಧಿ ಸ್ವಾತಿ ಕೆ.ವಿ. ಅವರು ಸೇರಿ ಬಸ್ಸಿನ ಅಡಿಯಲ್ಲಿ ಸಿಲುಕಿದ್ದ ಯುವತಿಯನ್ನು ಸುರಕ್ಷಿತವಾಗಿ ಹೊರತೆಗೆದರು.
ಬಳಿಕ ಸ್ಥಳೀಯರಾದ ಕಮಲಾಕ್ಷ ಮತ್ತು ರಾಮಚಂದ್ರ ಭಟ್ ಅವರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಕೊಕ್ಕಡ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.
ರಕ್ಷಣಾ ಕಾರ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಹಾಗೂ ಶ್ರೀರಾಮ ವಿದ್ಯಾಸಂಸ್ಥೆಯ ಗುಮಾಸ್ತ ದೇವಿಪ್ರಸಾದ್ ಶೆಟ್ಟಿ ಅವರೂ ಸಹ ಕೈಜೋಡಿಸಿದರು.
ಸ್ಥಳೀಯರು ಶಿಕ್ಷಕರು ಮತ್ತು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರ ಸಮಯಪ್ರಜ್ಞೆ ಹಾಗೂ ಮಾನವೀಯ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
