




ಬಂಟ್ವಾಳ: ಬಿಸಿರೋಡ್ನಲ್ಲಿ ನಡೆದ ಹಿಂದೂ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯ ಭಾವಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದಡಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಹತ್ಯೆಯ ಆರೋಪಿಯ ಮೂಲ ಭಾವಚಿತ್ರವನ್ನು ಎಡಿಟ್ ಮಾಡಿ, ಕೇಸರಿ ಶಾಲು ಹಾಗೂ ಕುಂಕುಮ ಧರಿಸಿರುವಂತೆ ಬದಲಾಯಿಸಿ, ಆತನು ಬಜರಂಗದಳದ ಮುಖಂಡ ಹಾಗೂ ಕಾರ್ಯಕರ್ತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.


ಅಲ್ಲದೆ, ಆರೋಪಿ ಸಂಘ ಪರಿವಾರದಿಂದ ತರಬೇತಿ ಪಡೆದಿದ್ದಾನೆ ಎಂಬ ರೀತಿಯ ಸಂದೇಶಗಳನ್ನು ಹರಿಬಿಟ್ಟು, ಈ ಕೃತ್ಯದ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತಂದು ಸಮಾಜದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ವಾಟ್ಸ್ಆಪ್ ಗುಂಪುಗಳು, ಇನ್ಸ್ಟಾಗ್ರಾಂ ಖಾತೆಗಳು ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ಗಳನ್ನು ಹಂಚಿಕೊಂಡಿರುವ ವ್ಯಕ್ತಿಗಳ ವಿರುದ್ಧ ದೂರು ನೀಡಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಸ್ಟ್ಗಳನ್ನು ಹರಡಿರುವವರನ್ನು ಪತ್ತೆಹಚ್ಚುವ ಹಾಗೂ ಪ್ರಕರಣದ ಸತ್ಯಾಸತ್ಯತೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
