



ಬೆಳ್ತಂಗಡಿಯಲ್ಲಿ ಯುಡಿಆರ್ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಇದು ಕಳ್ಳತನ ಪ್ರಕರಣವೆಂಬುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನು ಬಂಧಿಸಿ, 550 ಕೆಜಿ ಅಲ್ಯೂಮಿನಿಯಂ ವಯರ್ ವಶಪಡಿಸಿಕೊಳ್ಳಲಾಗಿದೆ.

ಜುಲೈ 1ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಮುಶ್ತಕ್ ಮೃತಪಟ್ಟ ಸ್ಥಳದಲ್ಲಿ ಕಳವು ನಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಅಪರಾಧ ಸಂಖ್ಯೆ 73/2026ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದರು.

ತನಿಖೆಯ ವೇಳೆ ಬೆಳ್ತಂಗಡಿ ಕಾಶಿಪಟ್ನ ನಿವಾಸಿ ಪಿ. ಇಬ್ರಾಹಿಂ ಲತೀಫ್ (36) ಎಂಬಾತನನ್ನು ಜುಲೈ 14ರಂದು ಬಂಧಿಸಲಾಯಿತು.
ವಿಚಾರಣೆ ವೇಳೆ, ಜೂನ್ 30ರ ರಾತ್ರಿ ಮುಶ್ತಕ್ ಹಾಗೂ ಮತ್ತೋರ್ವ ಆರೋಪಿಯೊಂದಿಗೆ ಸೇರಿ ಕುವೆಟ್ಟು ಶಕ್ತಿನಗರದ ಖಾಸಗಿ ಸಂಸ್ಥೆಯ ಆವರಣದಲ್ಲಿದ್ದ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಮುಶ್ತಕ್ನ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಆತ ಮೃತಪಟ್ಟಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಆರೋಪಿಯಿಂದ ಕಳವು ಮಾಡಿದ್ದ ಸುಮಾರು 550 ಕೆಜಿ ಅಲ್ಯೂಮಿನಿಯಂ ವಯರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೂ ವಿಚಾರಣೆ ವೇಳೆ, ಇಬ್ರಾಹಿಂ ಲತೀಫ್ ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಕುರಿತು ಬೆಳ್ತಂಗಡಿ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
