




ಪುತ್ತೂರು, ಜು.13: ಪುರುಷರಕಟ್ಟೆಯಲ್ಲಿ ನಡೆದ ಬೆದರಿಕೆ ಪ್ರಕರಣದಲ್ಲಿ ಪೊಲೀಸರು ಪಕ್ಷಪಾತದ ಧೋರಣೆ ತೋರಿದ್ದು, ತನಗೆ ನ್ಯಾಯ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಯುವತಿಯೊಬ್ಬರು ಸೋಮವಾರ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಸಿ, ಪ್ರಕರಣದ ಕುರಿತು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ದೂರಿನಲ್ಲಿ, ಜುಲೈ 8ರಂದು ಬೆಳಿಗ್ಗೆ ಸುಮಾರು 6.45ಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಯುವಕರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿಡಿಯೋ ಪುರಾವೆಗಳೊಂದಿಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಆದರೆ ತನ್ನ ದೂರು ದಾಖಲಾದ ತಕ್ಷಣವೇ, ತಾನು ದೂರು ನೀಡಿದ್ದ ವ್ಯಕ್ತಿಗಳು ತನ್ನ ವಿರುದ್ಧ ಹಾಗೂ ತನ್ನ ತಂದೆ, ಸಂಬಂಧಿಕರು ಮತ್ತು ಸಹಾಯ ಮಾಡಿದವರ ವಿರುದ್ಧ ಪ್ರತಿದೂರು ದಾಖಲಿಸಿದ್ದು, ಪೊಲೀಸರು ಅದರ ಸತ್ಯಾಸತ್ಯತೆ ಪರಿಶೀಲಿಸದೆ ಹಾಗೂ ಡಿಜಿಟಲ್ ಪುರಾವೆಗಳನ್ನು ಸಮಗ್ರವಾಗಿ ಪರಿಶೀಲಿಸದೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಾನು ರಕ್ಷಣೆ ಮತ್ತು ನ್ಯಾಯಕ್ಕಾಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರೂ, ಆರೋಪಿಯಂತೆ ಪರಿಗಣಿಸಿರುವುದು ತೀವ್ರ ಮಾನಸಿಕ ಯಾತನೆಗೆ ಕಾರಣವಾಗಿದೆ. ತನಿಖೆಯು ಪೂರ್ವಾಗ್ರಹದಿಂದ ಪ್ರಭಾವಿತವಾಗಿದ್ದು, ನಿಷ್ಪಕ್ಷಪಾತವಾಗಿ ನಡೆದಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ವಿಶೇಷ ಸೌಲಭ್ಯವನ್ನು ತಾನು ಕೋರುವುದಿಲ್ಲ. ಲಭ್ಯವಿರುವ ಎಲ್ಲಾ ಪುರಾವೆಗಳನ್ನು ಪರಿಶೀಲಿಸಿ, ಸತ್ಯ ಹೊರಬರಲು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಕಾನೂನುಬದ್ಧ ತನಿಖೆ ನಡೆಸುವಂತೆ ರಾಜ್ಯಪಾಲರು ಹಸ್ತಕ್ಷೇಪ ಮಾಡಬೇಕು ಎಂದು ಯುವತಿ ಮನವಿ ಮಾಡಿದ್ದಾರೆ.
