



ಹಾಸನ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಒಡೆದು (Yettinahole Project Pipeline Leak) ಅಪಾರ ಪ್ರಮಾಣ ನೀರು ಪೋಲಾದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಲಸುಲಿಗೆ ಗ್ರಾಮದ ಬಳಿ ತಡರಾತ್ರಿ ನಡೆದಿದೆ.


ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು ರೈತರ (Farmers) ಜಮೀನುಗಳು ಜಲಾವೃತಗೊಂಡಿದ್ದು ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ನೀರು ಹರಿದು ಹೋಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ಪೂರ್ಣಗೊಂಡು ನೀರು ಹರಿಸುವ ಮುನ್ನವೇ ಪೈಪ್ಲೈನ್ಗಳು ಒಡೆಯುತ್ತಿರುವುದರಿಂದ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಯಲಿದೆಯಾ ಎಂಬ ಅನುಮಾನ ಕಾಡುತ್ತಿದೆ.

2008 ರಲ್ಲಿ 8,000 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಯೋಜನೆಯ ಮೊತ್ತ ಇದೀಗ 23 ಸಾವಿರ ಕೋಟಿಗೆ ಏರಿಕೆಯಾಗಿದೆ. ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಮೊದಲ ಹಂತದ ನೀರೆತ್ತುವ ಯೋಜನೆ ಉದ್ಘಾಟನೆಗೊಂಡು 2 ವರ್ಷಗಳು ಕಳೆದರೂ ಯಾವ ಜಿಲ್ಲೆಗಳಿಗೂ ನೀರು ಹರಿಸಲು ಸಾಧ್ಯವಾಗಿಲ್ಲ. ಆದರೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ನೀರಿನ ಒತ್ತಡ ತಡೆಯದೇ ಪೈಪ್ಲೈನ್ಗಳ ಜೋಡಣೆ ಕಿತ್ತು ಬರುತ್ತಿವೆ.
ಈ ಹಿಂದೆ ಸಕಲೇಶಪುರ ತಾಲ್ಲೂಕಿನ, ದೇಕ್ಲಾ ಗ್ರಾಮದ ಬಳಿ ಪೈಪ್ಲೈನ್ ಜೋಡಣೆ ಬಿಟ್ಟು ರಸ್ತೆ ಕೊಚ್ಚಿ ಹೋಗಿತ್ತು. ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ತಡರಾತ್ರಿ ಹಲಸುಲಿಗೆ ಗ್ರಾಮದ ಬಳಿ ಪೈಪ್ಲೈನ್ ಒಡೆದಿದೆ. ನೀರಿನ ಶಬ್ಧಕ್ಕೆ ಸ್ಥಳೀಯರು ಆತಂಕಗೊಂಡಿದ್ದು, ಬೆಳಗ್ಗೆ ರೈತರು ತಮ್ಮ ಜಮೀನಿಗಳಿಗೆ ತೆರಳುತ್ತಿದ್ದ ವೇಳೆ ಬಾನೆತ್ತರಕ್ಕೆ ನೀರು ಚಿಮ್ಮುತ್ತಿರುವುದನ್ನ ಕಂಡು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ರೈತರು ಜಮೀನಿಗಳಿಗೆ ತೆರಳುವ ರಸ್ತೆಗೆ ನೀರು ಬಲವಾಗಿ ಚಿಮ್ಮುತ್ತಿದ್ದ ಕಾರಣ ರೈತರು ಜಮೀನಿಗೆ ತೆರಳಲು ಪರದಾಡಬೇಕಾಯಿತು.
