




ಪುತ್ತೂರು: ಕಾಂಗ್ರೆಸ್ ಮುಖಂಡ, ಕೋಡಿಂಬಾಡಿ ಮಹಿಷಮರ್ಧಿನಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಕಂಬಳ ಕ್ಷೇತ್ರದ ಸಕ್ರಿಯ ಸಂಘಟಕರಾಗಿದ್ದ ನಿರಂಜನ ರೈ ಮಠಂತಬೆಟ್ಟು ಅವರು ಇಂದು (ಜು.8) ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಲೂಕು ಕಚೇರಿಗೆ ಕೆಲಸದ ನಿಮಿತ್ತ ಆಗಮಿಸಿದ್ದ ವೇಳೆ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಿರಂಜನ ರೈ ಅವರು ಕೋಡಿಂಬಾಡಿ ಮಹಿಷಮರ್ಧಿನಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಕಂಬಳ ಸ್ಪರ್ಧೆಗಳಲ್ಲಿ ವೀಕ್ಷಕ ವಿವರಣೆಗಾರರಾಗಿಯೂ ಹೆಸರುವಾಸಿಯಾಗಿದ್ದರು.
ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದ ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಅವರ ಸರಳ ವ್ಯಕ್ತಿತ್ವ, ಜನಸ್ನೇಹಿ ನಡವಳಿಕೆ ಹಾಗೂ ಸಮಾಜಮುಖಿ ಕಾರ್ಯಗಳಿಂದ ಅಪಾರ ಜನಾನುರಾಗವನ್ನು ಗಳಿಸಿದ್ದರು.
ಅವರ ಅಗಲಿಕೆಗೆ ರಾಜಕೀಯ, ಸಾಮಾಜಿಕ ಹಾಗೂ ಕಂಬಳ ವಲಯದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
