




ಸುಳ್ಯ: ತೂಗುಸೇತುವೆಗಳ ಸರದಾರ ಎಂದೇ ಹೆಸರುವಾಸಿಯಾಗಿದ್ದ, ಪದ್ಮಶ್ರೀ ಪುರಸ್ಕೃತರಾಗಿದ್ದ ಡಾ.ಗಿರೀಶ್ ಭಾರದ್ವಾಜ್ ಅವರು ಅಗಲಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲಿ ಕೆಲ ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದರು. ಇಂದು ಮುಂಜಾನೆ ತೀವ್ರ ಅಸ್ವಸ್ಥಗೊಂಡ ಅವರು, ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಅವರಿಗೆ 76 ವರ್ಷ ವಯಸ್ಸಾಗಿತ್ತು.

ದೇಶದಾದ್ಯಂತ 140 ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸುವ ತೂಗು ಸೇತುವೆಗಳ ಸರದಾರ ಎಂದು ಹೆಸರು ಮಾಡಿದ್ದರು. 2017ರಲ್ಲಿ ದೇಶ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂಜಿನಿಯರ್ ಪದವಿ ಪಡೆದ ಬಳಿಕ ಆಯಶ್ಯಿಲ್ಪ ಇಂಜಿನಿಯರಿಂಗ್ ವರ್ಕ್ಸ್ ಆರಂಭಿಸಿದ್ದ ಭಾರದ್ವಾಜ್ ಅವರು ಬಳಿಕ ತೂಗುಸೇತುವೆ ನಿರ್ಮಾಣ ಆರಂಭಿಸಿ ದೇಶ ವಿದೇಶಗಳಲ್ಲಿ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಪ್ರಸಿದ್ಧರಾಗಿದ್ದರು. ಪತ್ನಿ ದಿ.ಉಷಾ. ಪುತ್ರರಾದ ಸುದರ್ಶನ್, ಪತಂಜಲಿ, ಪುತ್ರಿ ರಷ್ಯಾ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಗ್ರಾಮೀಣ ಭಾಗಗಳಿಗೆ ತೂಗುಸೇತುವೆಗಳನ್ನು ನಿರ್ಮಿಸಿಕೊಡುವ ಮೂಲಕ ಜನರ ಹೃದಯಗಳನ್ನು ಜೋಡಿಸಿದ ಖ್ಯಾತಿ ಸುಳ್ಯದ ಗಿರೀಶ್ ಭಾರದ್ವಾಜ್ ಅವರಿಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕು, ಮಂಗಳೂರು ತಾಲ್ಲೂಕಿನ ಕುಪ್ಪೆಪದವಿನಲ್ಲಿ ನಿರ್ಮಾಣ ಮಾಡಿ ಹಳ್ಳಿ ಜನರಿಗೆ ನೆರವಾಗಿದ್ದರು.
ಅವರ 100ನೇ ಸೇತುವೆಯು ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಮನೆಯ ಸಮೀಪವಿರುವ ಸುಳ್ಯದ ಮಂಡೆಕೋಲಿನಲ್ಲಿ ನಿರ್ಮಾಣವಾಗಿತ್ತು. ಭಾರದ್ವಾಜ್ ಅವರ ತಂತ್ರಜ್ಞಾನದಿಂದ ಪ್ರಯೋಜನ ಪಡೆದ ಗ್ರಾಮಸ್ಥರು ಅವರನ್ನು ಸುಳ್ಯದ ವಿಶ್ವೇಶ್ವರಯ್ಯ, ಸೇತುವೆಗಳ ಸರ್ದಾರ್ ಎಂದೇ ಕರೆಯುತ್ತಿದ್ದರು.
