




ಜೈಪುರ: ರಾಜಸ್ಥಾನದ ಜೈಪುರದಲ್ಲಿನಡೆದ ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮೇಲೆ ಹಲ್ಲೆ ಮಾಡಲಾಗಿದೆ.ಸೋಮವಾರ ಮಧ್ಯಾಹ್ನ ಶಹೀದ್ ಸ್ಮಾರಕದ ಹತ್ತಿರ ಶಾಂತಿಯುತ ಪ್ರತಿಭಟನೆ ನಡೆಸಲು ಅಭಿಜಿತ್ ದಿಪ್ಕೆ ಕರೆ ನೀಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಬೆಂಬಲಿಗರ ಹೆಗಲ ಮೇಲೆ ನಿಂತು ಜನರನ್ನುದ್ದೇಶಿಸಿ ಮಾತನಾಡಲು ತೆರಳುತ್ತಿದ್ದ ವೇಳೆ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಇಬ್ಬರು ವ್ಯಕ್ತಿಗಳು ಸ್ಕಾರ್ಫ್ ಎಳೆದು, ಹಲವು ಬಾರಿ ಕಪಾಳಮೋಕ್ಷ ಮಾಡಿದ್ದು, ಕೆಳಕ್ಕೆ ಎಳೆಯಲು ಯತ್ನಿಸಿದ್ದಾರೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೂ ಮೊದಲು ಸಿಜೆಪಿ ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರ ಪ್ರತಿಭಟನೆಗಳನ್ನು ಆಯೋಜಿಸಿತ್ತು. ದೆಹಲಿಯಿಂದ ಆರಂಭವಾದ ಈ ಪ್ರತಿಭಟನೆಗಳು ಅಮೃತಸರ, ಪುಣೆ, ಬೆಂಗಳೂರು, ಹೈದರಾಬಾದ್ ಹಾಗೂ ಲಖನೌವರೆಗೆ ವಿಸ್ತರಿಸಿದ್ದವು.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್ಇಗೆ ಸಂಬಂಧಿಸಿದ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅಭಿಜಿತ್ ದಿಪ್ಕೆ ಆಗ್ರಹಿಸಿದ್ದಾರೆ. ಈ ಹೋರಾಟ ಯುವಕರ ಧ್ವನಿಯಾಗಿದೆ ಎಂದು ಅವರು ಹೇಳಿದ್ದಾರೆ.

